ಮರುಜನ್ಮ ಪಡೆದ ಕೆರೆಯ ಕಥೆ (in Kannada)

By Translated by H N Ananda; original (English) by Vasundhara KrishnanionJan. 05, 2015in Environment and Ecology

ಮರು ಜನ್ಮ ಪಡೆದ ಬೆಂಗಳೂರಿನ ಒಂದು ಕೆರೆಯ ಕತೆ

‘ವಿಕಲ್ಪ ಸಂಗಮ’ಕ್ಕಾಗಿಯೇ ಬರೆದ ವಿಶೇಷ ಲೇಖನ

ಆಕೆ ಒಬ್ಬ ವೀರಾಗ್ರಣಿ. ತನಗಾಗಿ ಮತ್ತು ತನ್ನ ಸೋದರಿಯರಿಗಾಗಿ ಹೋರಾಡಿ ಬೆಂಗಳೂರಿಗೆ ಹೆಸರು ತಂದವಳು. ಶತಕಗಳ ಹಿಂದೆ ಜನಗಳಿಗೆಂದೇ ಆಕೆ ಜೀವ ತಳೆದಳು. ತನ್ನ ಸುತ್ತಮುತ್ತಲಿನ ಮಂದಿ ಬೇಡವಾದ್ದೂ ಸೇರಿದಂತೆ ಕೊಟ್ಟಿದ್ದೆಲ್ಲವನ್ನೂ ಸ್ವೀಕರಿಸತೊಡಗಿದ್ದರಿಂದ ಆಕೆಗೆ ಹಾನಿ ಆಯಿತು. ಆ ಹಾನಿಯನ್ನು ಕೆಲವರು ಗಮನಿಸಿದರು. ಆಕೆಯನ್ನು ಸುಸ್ಥಿತಿಗೆ ಮರಳಿ ತರಲು ನಿರ್ಧರಿಸಿ ಅವರೆಲ್ಲ ಒಟ್ಟುಗೂಡಿದರು. ಆದರೆ ಅದೇನು ಸುಲಭದ ಕೆಲಸವಾಗಿರಲಿಲ್ಲ. ಕಠಿಣ ಪರಿಶ್ರಮದ ಅಗತ್ಯವಿತ್ತು. ಕೊನೆಗೆ ಅದು ಫಲ ನೀಡಿತು. ಆದ್ದರಿಂದಲೇ ಇಂದು ಆಕೆ ಜೀವ ತುಂಬಿಕೊಂಡು ನಳನಳಿಸುತ್ತಿದ್ದಾಳೆ. ಆಸುಪಾಸಿನ ಜನಗಳಿಗೆ ಸಂತಸ ನೀಡುವುದರ ಜತೆಗೆ ಅವರ ಮನೋಭಾವವೇ ಬದಲಾಗಲು ಕಾರಣವಾಗಿದ್ದಾಳೆ. ತನ್ನ ಸೋದರಿಯರಿಗೂ ಜೀವ ಕೊಡುವಂತೆ ಪ್ರೇರೇಪಿಸಿದ್ದಾಳೆ.

ಕೈಕೊಂಡರಹಳ್ಳಿ ಕೆರೆಯ ಒಂದು ನೋಟ ಚಿತ್ರ: ನಮಿತ ಝಾಕರ್
ಕೈಕೊಂಡರಹಳ್ಳಿ ಕೆರೆಯ ಒಂದು ನೋಟ ಚಿತ್ರ: ನಮಿತ ಝಾಕರ್

ಜನನಿಬಿಡ ಬೆಂಗಳೂರಿನಲ್ಲಿರುವ ಕೈಕೊಂಡರಹಳ್ಳಿ ಕೆರೆ ಒಂದು ಸುಂದರ ಆಹ್ಲಾದಕರ ತಾಣ. ಕಾಂಕ್ರೀಟ್ ಕಾಡಿನ ಮಧ್ಯೆ 48 ಎಕರೆಗಳಷ್ಟು ಜಾಗದಲ್ಲಿ ಅಡಗಿರುವ ಒಂದು ಜಲಮಯ ಪ್ರದೇಶ. ಇಂದು ಅಲ್ಲಿ ಕಾಲಿಟ್ಟಾಗ ಪ್ರಕೃತಿಯ ಮಡಿಲಿಗೇ ಜಾರಿದಂತಹ ಅನುಭವ. ಅಂದಿನÀ ದುಸ್ಥಿತಿಗೆ ಮರುಗಿ ಅದನ್ನು ಉಳಿಸಿ, ಮರುಜೀವ ನೀಡಲು ಹೊಣೆ ಹೊತ್ತವರು ಸುತ್ತಮುತ್ತಲಿನ ಕೆಲವು ಪ್ರಜ್ಞಾವಂತ ಮಂದಿ. ಈ ಕೆರೆಗೆ ಅದರ ಹಿಂದಿನ ಶೋಭೆಯನ್ನು ಮರುತರಲು ಸಾಧ್ಯ ಎಂಬ ಕನಸನ್ನು ಕಂಡವರು ಇವರು. ಅದೆಂತಹ ವೈವಿಧ್ಯಮಯ ಗುಂಪು ಅದು! ಪರಿಸರವಾದಿ, ವಾಸ್ತುಶಿಲ್ಪಿ, ಸರ್ಪತಜ್ಞ, ಪಕ್ಷಿಪ್ರಿಯ ಮುಂತಾದ ಪರಿಣಿತರ ಜತೆಗೆ ಕೆರೆಯ ಪುನಶ್ಚೇತನದ ಅವಶ್ಯಕತೆಯನ್ನ ಮನಗಂಡ ಶ್ರೀಸಾಮಾನ್ಯರೂ ಸೇರಿದ್ದರು. ಈ ಕೆರೆಯ ಪುನರುಜ್ಜೀವಿತ ಕಾರ್ಯದ ಹಿಂದೆ ಅವರೆಲ್ಲರ ಉತ್ಸಾಹ, ಪರಿಶ್ರಮಗಳ ಫಲ ಅಡಗಿದೆ.

ಪುನಶ್ಚೇತನ ಕಾರ್ಯಕ್ಕೆ ಅದೆಷ್ಟು ಅಡಚಣೆಗಳು! ಕೆರೆಯನ್ನೇ ಕಬಳಿಸಿ ಕಟ್ಟಡ ನಿರ್ಮಿಸಿದ ರಿಯಲ್ ಎಸ್ಟೇಟ್ ಮಂದಿ, ಕೊಳಚೆ ನೀರನ್ನು ನೇರವಾಗಿ ಕೆರೆಗೆ ಬಿಡುತ್ತಿದ್ದವರು, ಮಳೆಯ ನೀರು ಕೆರೆಗೆ ಹರಿಯದಂತೆ ಇದ್ದ ಅಡೆತಡೆಗಳು, ಪ್ಲ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಮಾಡಿದ ಗಣೇಶನ ಬೃಹತ್ ಮೂರ್ತಿಯನ್ನು ಈ ಕೆರೆಯಲ್ಲೇ ವಿಸರ್ಜಿಸಲು ಹಠ ಹಿಡಿಯುತ್ತಿದ್ದ ಭಕ್ತಾದಿಗಳು.. ಹೀಗೇ ಒಂದೇ ಎರಡೇ ಸವಾಲುಗಳು. ಆದರೆ ಕೆರೆಯನ್ನು ಸ್ವಚ್ಛಗೊಳಿಸಲು ದೃಢ ಮನಸ್ಸು ಮಾಡಿದ್ದವರಿಗೆ ಇದು ನಿವಾರಿಸಲಾಗದಂತಹ ಅಡಚಣೆಗಳಾಗಲಿಲ್ಲ. ಈ ಕಾಯಕಕ್ಕೆ ನೆರವು ನೀಡಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.

ಪುನಶ್ಚೇತನ ಕಾರ್ಯ ಪ್ರಾರಂಭಿಸುವ ಮೊದಲು ಅದರ ಬಗ್ಗೆ ಸಾಕಷ್ಟು ಚಿಂತನೆ ನಡೆಯಿತು. ಒಂದಿಷ್ಟು ಜಾಗÀ ಅಗೆದು ನೀರು ತುಂಬುವ ಕಾರ್ಯ ಅದಾಗಿರಲಿಲ್ಲ. ಇತರ ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕಿತ್ತು – ಉದಾಹರಣೆಗೆ, ಕೆರೆಯ ಮೂಲ ರಚನೆ. ಕೆರೆಯ ವಿವಿಧ ಭಾಗಗಳು ಪಕ್ಷಿಗಳಿಗೆ ವಾಸ ಮಾಡಲು ಹೇಳಿ ಮಾಡಿದಂತಹ ತಾಣಗಳಾಗಿದ್ದವು. ಆದರೆ ದೋಣಿ ವಿಹಾರದಂತಹ ಚಟುವಟಿಕೆಗಳಿಂದಾಗಿ ವಿಹಾರಾರ್ಥಿಗಳ ಕೂಗು ಕಿರುಚಾಟದಿಂದ ಪಕ್ಷಿಗಳಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ ದೋಣಿ ವಿಹಾರ ನಿಲ್ಲಿಸಬೇಕಾಗಿತ್ತು. ಪುನಶ್ಚೇತನ ಕಾರ್ಯದ ಅತಿ ಮುಖ್ಯ ಅಂಶ ಎಂದರೆ ಕೆರೆಯ ಪ್ರದೇಶದಲ್ಲಿ ನೀರವತೆ ನೆಲೆಸುವಂತೆ ಮಾಡುವುದೇ ಆಗಿತ್ತು. 2008ರಲ್ಲಿ ಈ ಕಾರ್ಯದ ಬಗ್ಗೆ ಚಿಂತನೆ ಪ್ರಾರಂಭವಾದರೂ ನೀರು ಹೊರಹಾಕಿ, ಹೂಳು ತೆಗೆದು ಮರು ನಿರ್ಮಾಣ ಕಾರ್ಯ ಮುಗಿದಿದ್ದು ಎರಡು ವರ್ಷಗಳ ನಂತರ – 2010ರಲ್ಲಿ.

ನೀರು ಕಾಗೆಗಳು ವಿಶ್ರಮಿಸುತ್ತಿವೆ ಚಿತ್ರ: ವಿನೋದ್ ವಾಧ್ವಾನ್
ನೀರು ಕಾಗೆಗಳು ವಿಶ್ರಮಿಸುತ್ತಿವೆ ಚಿತ್ರ: ವಿನೋದ್ ವಾಧ್ವಾನ್

ಯಾವುದೇ ಇಂತಹ ಪರಿಸರ ಸಂಬಂಧಿತ ಕಾರ್ಯ ಕೈಗೊಂಡಾಗ ಸ್ಥಳೀಯರನ್ನು ಕಡೆಗಣಿಸಿ ಯೋಜನೆ ಹೆಣೆದು ಕಾರ್ಯಗತಗೊಳಿಸಿ ನಂತರ ಅವರಿಗೆ ಹೀಗೆ ಮಾಡಿ, ಹೀಗೆ ಮಾಡಬೇಡಿ ಎಂದು ಹೇಳುವುದೇ ಎಲ್ಲೆಡೆ ರೂಢಿ. ಆದರೆ ಕೈಕೊಂಡರಹಳ್ಳಿ ಪರಿಸ್ಥಿತಿ ವಿಭಿನ್ನ. ಇಲ್ಲಿನ ಮಂದಿ ಕೆರೆಯ ಪಾರಂಪರಿಕ ಉಪಯೋಗಗಳನ್ನು ಮುಂದುವರೆಸಿಕೊಂಡೇ ಬಂದಿದ್ದರು. ಕೆರೆಯ ಆಸುಪಾಸಿನಲ್ಲಿ ಬೆಳೆಯುತ್ತಿದ್ದ ಹುಲ್ಲನ್ನು ಸಂಗ್ರಹಿಸಿ ತಮ್ಮ ದನಕರುಗಳಿಗೆಂದು ಮೇವಾಗಿ ಉಪಯೋಗಿಸುತ್ತಿದ್ದರು. ಇದರಿಂದ ಕೆರೆಯೊಟ್ಟಿಗೆ ಜನಗಳ ಬಾಂಧವ್ಯ ಮುಂದುವರೆಸಿಕೊಂಡು ಹೋಗಲು ಅವಕಾಶ ಒದಗಿತ್ತು. ಹಾಗೆಯೇ ಕೆರೆಯನ್ನು ಉಳಿಸುವ ಜವಾಬ್ದಾರಿ ಸಹ. ಪುನಶ್ವೇತನ ಕಾರ್ಯ ಮುಗಿದ ಮೇಲೆ ಈ ಕೆರೆಯಲ್ಲಿ ಮೀನು ಹಿಡಿಯಲು ಅನುಮತಿ ಪಡೆದುಕೊಂಡಿದ್ದ ಗುತ್ತಿಗೆದಾರನನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಈಗ ಮೀನು ಸಂಗ್ರಹ ಹೆಚ್ಚಾಗಿದೆ ಮತ್ತು ಒಳ್ಳೆಯ ಮೀನು ಸಹ ಸಿಗುತ್ತಿದೆ ಎಂಬ ಸಂತಸ ಅವನಿಗೆ. ಈ ಕೆರೆಯಲ್ಲಿ ವಿವಿಧ ಜಾತಿಯ ಮೀನುಗಳು ಲಭ್ಯ. “ಮೀನುಗಳ ಸಂತಾನೋತ್ಪತ್ತಿ ಸಮಯದಲ್ಲಿ ನಾನು ಇಲ್ಲಿ ಮೀನು ಹಿಡಿಯುವುದಿಲ್ಲ. ಹಾಗೆ ಮಾಡಿದರೆ ನನ್ನ ಇಳುವರಿ ಕಡಿಮೆ ಆಗುತ್ತದೆ ಮತ್ತು ಇಲ್ಲಿಗೆ ಬರುವ ಪಕ್ಷಿಗಳ ಸಂಖ್ಯೆÉ ಸಹ ಕಡಿಮೆ ಆಗುತ್ತದೆ” ಎಂದು ಆತ ಹೇಳಿದಾಗ ಅವನು ತೋರಿದÀ ಕಾಳಜಿಯ ಬಗ್ಗೆ ನನಗೆ ಖುಷಿಯಾಯಿತು.

ಕೈಕೊಂಡರಹಳ್ಳಿ ಕೆರೆ ಮೂರ್ತಿ ವಿಸರ್ಜನೆಗೆ ಬಹಳ ಹೆಸರುವಾಸಿಯಾಗಿತ್ತು. ಇದೊಂದು ದೈವಕಾರ್ಯವಾದ್ದರಿಂದ ಅದಕ್ಕೆ ಅಡ್ಡಿ ಪಡಿಸಬಾರದೆಂದು ಕೆರೆಯ ಪಕ್ಕದಲ್ಲೇ ಒಂದು ಹೊಂಡ ತೋಡಿ ಅದನ್ನು ಕೆರೆಯ ನೀರಿನಿಂದ ತುಂಬಿಸಿ ವಿಸರ್ಜನೆಗೆ ಬಳಸಲು ಜನರಿಗೆ ಹೇಳಲಾಯಿತು. ಮೊದಲುಮೊದಲು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಜನ ತಾವು ಕೆರೆಯನ್ನೇ ಬಳಸುವುದಾಗಿ ವಾದಿಸಿದರೂ ಅವರಿಗೆ ಕೆರೆಯ ನೈರ್ಮಲ್ಯ್ಯದ ಅಗತ್ಯತೆಯನ್ನು ವಿವರಿಸಿದಾಗ ಅವರಿಗೆ ವಿಷಯ ಮನದಟ್ಟಾಗಿ ಅವರು ವಿಸರ್ಜನೆಗೆ ಹೊಂಡವನ್ನೇ ಬಳಸಲು ಶುರುಮಾಡಿದರು. ಆದರೂ ವಿಸರ್ಜನೆಗೆ ಕೆರೆಯನ್ನು ಬಳಸದಂತೆ ಮಾಡಲು ಪಹರೆ ಇಡಲಾಗಿತ್ತು. ಇದರಿಂದಾಗಿ ಎಲ್ಲರೂ ಈ ಹೊಂಡವನ್ನೇ ವಿಸರ್ಜನೆಗೆ ಬಳಸಿದರು. ನಂತರ ಆ ಹೊಂಡವನ್ನು ಒಣಗಲು ಬಿಟ್ಟು ಅಲ್ಲಿ ಶೇಖರವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದ ತ್ಯಾಜ್ಯವನ್ನು ಸೂಕ್ತರೀತಿಯಲ್ಲಿ ವಿಲೇವಾರಿ ಮಾಡಲಾಯಿತು.

ಕೆರೆಯ ಸುತ್ತಮುತ್ತ ನಡೆಯುವ ಚಟುವಟಿಕೆಗಳು ಚಿತ್ರ: ನಳಿನಿ ಶೇಖರ್
ಕೆರೆಯ ಸುತ್ತಮುತ್ತ ನಡೆಯುವ ಚಟುವಟಿಕೆಗಳು ಚಿತ್ರ: ನಳಿನಿ ಶೇಖರ್

ದಿನನಿತ್ಯದ ಕೆಲಸದಿಂದ ದಣಿದ ಮನಗಳಿಗೆ ನೆಮ್ಮದಿ ನೀಡುವ ಒಂದು ಚೇತೋಹಾರಿಯಾದ ಪರಿಸರ ಇಲ್ಲಿ ನಿರ್ಮಾಣಗೊಂಡಿದೆ. ಕೆರೆಯ ಸುತ್ತಲೂ ಇರುವ ಕಾಲ್ದಾರಿ ಕಾಲ್ನಡಿಗೆಗೆ ಅವಕಾಶ ಮಾಡಿಕೊಟ್ಟಿದೆ. ಮಕ್ಕಳಿಗೆ ಆಟವಾಡಲು ಒಂದು ಸುರಕ್ಷಿತ ಪ್ರದೇಶವಾಗಿ ಮಾರ್ಪಟ್ಟಿದೆ. ಈ ಕೆರೆ ಕೇವಲ ಒಂದು ಜಲ ಪ್ರದೇಶವಲ್ಲ. ಅದು ಅನೇಕ ಚಟುವಟಿಕೆಗಳ ಕೇಂದ್ರವೂ ಆಗಿದೆ. ಇಲ್ಲಿ ಕತೆ ಹೇಳಲಾಗುತ್ತದೆ, ಕತೆ ಬರೆಸಲಾಗುತ್ತದೆ, ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಭಾಷಣ, ಚರ್ಚೆ, ಸಮೀಕ್ಷೆ, ಪಕ್ಷಿವೀಕ್ಷಣೆ.. ಹೀಗೇ ಒಂದೇ ಎರಡೇ. ವೈವಿಧ್ಯಮಯ ಚಟುವಟಿಕೆಗಳ ತಾಣ – ಮಕ್ಕಳಿಗೆ ಹಾಗೂ ವಯಸ್ಕರಿಗೆ. ಈ ಪರ್ಯಾವರಣ ಸಂಬಂಧಿ ಚಟುವಟಿಕೆಗಳಿಂದ ಜನಗಳ ಪರಿಸರ ಜ್ಞಾನ ವೃದ್ಧಿಸಿ, ಪ್ರಕೃತಿ ನಮ್ಮ ದೈನಂದಿಕ ಜೀವನದಲ್ಲಿ ಯಾವ ಪಾತ್ರ ವಹಿಸುತ್ತಿದೆ ಎಂಬುದರ ಬಗ್ಗೆ ತಿಳಿವಳಿಕೆ ಹೆಚ್ಚುವಂತೆ ಮಾಡಲು ಸಹಾಯಕಾರಿ. ಹಾಗೆಯೇ ಈ ಪ್ರದೇಶದ ಪಕ್ಷಿಕುಲ ಹಾಗೂ ಸಸ್ಯ ಸಂಪತ್ತಿನ ಬಗ್ಗೆ ಸಹ ಅವರಲ್ಲಿ ಅರಿವು ಮೂಡಿಸುತ್ತದೆ.

ಇತರ ಚಟುವಟಿಕೆಗಳ ಒಂದು ನೋಟ ಚಿತ್ರ: ನಳಿನಿ ಶೇಖರ್
ಇತರ ಚಟುವಟಿಕೆಗಳ ಒಂದು ನೋಟ ಚಿತ್ರ: ನಳಿನಿ ಶೇಖರ್
ಪೆಲಿಕನ್ ಚಿತ್ರ: ನಮಿತಾ ಝಾಕರ್
ಪೆಲಿಕನ್ ಚಿತ್ರ: ನಮಿತಾ ಝಾಕರ್

ಹೂತುಂಬಿದ ಗಿಡಗಳು, ಅವುಗಳ ಆಕರ್ಷಣೆಯಿಂದ ಬರುವ ಕೀಟಲೋಕದ ಅತಿಥಿಗಳು, ಪಕ್ಷಿಗಳು ಇವುಗಳಿಂದಾಗಿ ಇದೊಂದು ಹಸಿರಿನಿಂದ ನಳಿನಳಿಸುತ್ತಿರುವ ಜಾಗವಾಗಿ ಮಾರ್ಪಟ್ಟಿದೆ. ಸುತ್ತಮುತ್ತಲು ಕಾಂಕ್ರೀಟ್‍ಮಯ ಆಗಿರುವುದರಿಂದ ಪಕ್ಷಿಗಳು ಬೀಡು ಬಿಡಲು ಇದೊಂದು ಆಪ್ಯಾಯಮಾನವಾದ ಪ್ರದೇಶವಾಗಿದೆ. ಇಲ್ಲಿಗೆ ಬರುವ ಪಕ್ಷಿಗಳಲ್ಲಿ ಗಣ್ಯ ಅತಿಥಿ ಎಂದರೆ ಪೆಲಿಕನ್. ಇವುಗಳ ಜತೆಗೆ ಕಂಡುಬರುವುದು ವೈವಿಧ್ಯಮಯ ಪಕ್ಷಿಗಳ ಹಿಂಡು – ಬಗೆಬಗೆಯ ಮೀಂಚುಳ್ಳಿ, ಕಬ್ಬಾರೆ ಹಕ್ಕಿ, ಕೆನ್ನೀರ ಬಕ, ಕೊಕ್ಕರೆಗಳು, ಕುಟ್ಟು ಹಕ್ಕಿ, ದೇವನ ಹಕ್ಕಿ, ನೀರು ಕಾಗೆ, ಸೂರಕ್ಕಿ, ಟಿಟ್ಟಿಭ.. ಹೀಗೆ ಒಂದೇ ಎರಡೇ. ಪಕ್ಷಿ ಪ್ರಿಯರ ಕಣ್ಣುಗಳಿಗೆ ಹಬ್ಬ. ಇವುಗಳಿಗೆ ಆಶ್ರಯ ಕೊಡಲು ಬೆಳೆಯುತ್ತಿವೆ ಬೇವು, ನೇರಳೆ, ಗುಲ್‍ಮೊಹರ್, ಸಿಂಗಪುರ್ ಚೆರ್ರಿ ಮುಂತಾದ ಮರಗಳು.

ಬಿಳಿ ಕತ್ತಿನ ಮೀಂಚುಳ್ಳಿ ಚಿತ್ರ: ನಮಿತಾ ಝಾಕರ್
ಬಿಳಿ ಕತ್ತಿನ ಮೀಂಚುಳ್ಳಿ ಚಿತ್ರ: ನಮಿತಾ ಝಾಕರ್
ಬಣ್ಣದ ಕೊಕ್ಕರೆ ಚಿತ್ರ: ವಿನೋದ್ ವಾಧ್ವಾನ್
ಬಣ್ಣದ ಕೊಕ್ಕರೆ ಚಿತ್ರ: ವಿನೋದ್ ವಾಧ್ವಾನ್

ಕೆರೆಯ ಪುನರುಜ್ಜೀವನಷ್ಟೇ ಈ ಯೋಜನೆಯ ಉದ್ದೇಶವಾಗಿರಲಿಲ್ಲ. ನಿರ್ವಹಣೆಗೂ ಅಷ್ಟೇ ಮಹತ್ವ ನೀಡಲಾಗಿದೆ. ಹಿರಿಯ ನಾಗರಿಕರಾದ ಶ್ರೀ ಡೇವಿಡ್ ಈ ಕಾರ್ಯವನ್ನು ಖುಷಿಯಿಂದ ಒಪ್ಪಿಕೊಂಡು ಹುಮ್ಮಸ್ಸಿನಿಂದ ನಿರ್ವಹಿಸುತ್ತಿದ್ದಾರೆ. ಅದರ ಬಗ್ಗೆ ಅವರು ಸಂಭ್ರಮದಿಂದ ವಿಷಯ ಹಂಚಿಕೊಳ್ಳುತ್ತಾರೆ. ಪರಿಸರದ ಬಗ್ಗೆ ಜನಗಳ ಧೋರಣೆಯಲ್ಲಿ ಆಗಿರುವ ಬದಲಾವಣೆಯನ್ನು ಅವರು ಗಮನಿಸಿದ್ದಾರೆ. ಹೆಚ್ಚು ಹೆಚ್ಚು ಮಂದಿ ಈ ವಿಷಯದಲ್ಲಿ ಆಸಕ್ತಿ ವಹಿಸುತ್ತಿದ್ದಾರೆ ಎಂದು ಡೇವಿಡ್ ಹೇಳುತ್ತಾರೆ. ಆದರೆ ನಿರ್ವಹಣೆ ಕಾರ್ಯ ಸುಲಭವಲ್ಲ. ಇಲ್ಲಿ ಆತುರಕ್ಕೆ ಅವಕಾಶವಿಲ್ಲ. ಈ ಕೆರೆಯನ್ನು ಉಳಿಸಿ, ಬಾಳಿಸಿಕೊಂಡು ಹೋಗಬೇಕಾದರೆ ಕಾಳಜಿಯುಕ್ತ ಇನ್ನಷ್ಟು ಮಂದಿಯ ಅವಶ್ಯಕತೆ ಇದೆ. ‘ಯುನೈಟೆಡ್ ವೆ’ ಸೇರಿದಂತೆ ಸ್ಥಳೀಯರೇ ಸೇರಿ ರಚಿಸಿಕೊಂಡಿರುª ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರ್ಥಿಕ ಸಹಾಯ ಮಾಡುತ್ತವೆ. ಇದರಲ್ಲಿ ‘ಯುನೈಟೆಡ್ ವೆ’ ಸಂಸ್ಥೆಯದೇ ಬೃಹತ್ ಪಾಲು. ಅದು ಭದ್ರತೆ, ತೋಟಗಾರಿಕೆ, ಕಳೆ ತೆಗೆಯುವ ಕಾರ್ಯ, ಯಂತ್ರಗಳ ದುರಸ್ಥಿ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈ ಕೆರೆ ಮತ್ತು ಇತರ ಐದು ಕೆರೆಗಳ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ ಈ ಬಗ್ಗೆ ಮಹಾನಗರ ಪಾಲಿಕೆ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಕೆರೆಗೆ ಸಂಬಂಧಿಸಿದ ಕಾರ್ಯಗಳಿಗೆ ಉಪಯೋಗಿಸುವ ಯಂತ್ರಗಳ ನಿರ್ವಹಣೆ ಈ ಸಮಿತಿಯದ್ದು. ಅದರ ಜತೆಗೆ ಸಿಬ್ಬಂದಿಯ ಕಾರ್ಯದ ಬಗ್ಗೆ ನಿಗಾ ವಹಿಸುತ್ತದೆ. ಸ್ಥಳೀಯರು ಕೇವಲ ಔಪಚಾರಿಕವಾಗಿರದೆ ಹೇಗೆ ಸಕ್ರಿಯವಾಗಿ ಕಾರ್ಯನಿರತವಾಗಬಹುದು ಎಂಬುದಕ್ಕೆ ಈ ಸಮಿತಿ ಒಂದು ಹೇಳಿ ಮಾಡಿಸಿದ ಉದಾಹರಣೆ.

ಕೈಕೊಂಡರಹಳ್ಳಿ ಕೆರೆಯ ಏರಿಯ
ಕೈಕೊಂಡರಹಳ್ಳಿ ಕೆರೆಯ ಏರಿಯ

ನೂರಾರು ವರ್ಷಗಳಷ್ಟು ಹಳೆಯದಾದ ಕೈಕೊಂಡರಹಳ್ಳಿ ಒಂದು ಮಾನವ ನಿರ್ಮಿತ ಕೆರೆ. ಹಾಳನಾಯಕನಹಳ್ಳಿ ಕೆರೆ, ದೊಡ್ಡಕಾನೇನಹಳ್ಳಿ ಕೆರೆ, ಭೋಗೇನಹಳ್ಳಿ ಕೆರೆ, ದೇವರಬೀಸನಹಳ್ಳಿ ಕೆರೆ, ಸೌಲಕೆರೆ, ಕಾಸವನಹಳ್ಳಿ ಮತ್ತು ಹರಳೂರು ಕೆರೆಗಳು ಒಂದಕ್ಕೊಂದು ಸಂಪರ್ಕವಿಟ್ಟುಕೊಂಡಿದ್ದ ವ್ಯವಸ್ಥೆಯ ಕೆರೆಗಳ ಜಾಲ. ಸೌಲಕೆರೆ ಮತ್ತು ಕಾಸವನಹಳ್ಳಿ ಕೆರೆಗಳ ಮಧ್ಯೆ ಕೈಕೊಂಡರಹಳ್ಳಿ ಕೆರೆ ಇದೆ. ಸೌಲಕೆರೆ ಕೆರೆಗೂ ಇದೀಗ ಕಾಯಕಲ್ಪ ನಡೆದಿದೆ. ಕೈಕೊಂಡರಹಳ್ಳಿ ಕೆರೆಗೆ ಮರುಜನ್ಮ ಪಡೆದ ಮೇಲೆ ಸುತ್ತಮುತ್ತಲಲ್ಲಿ ನೀರಿನ ಮಟ್ಟ ಏರಿರುವುದನ್ನು ಮತ್ತು ಪರಿಸರದಲ್ಲಿ ಆಗುತ್ತಿರುವ ಬದಲಾವಣೆಯನ್ನು ಜನ ಗಮನಿಸಿ ಪುಳಕಿತರಾಗಿದ್ದಾರೆ. ಇತರ ಕೆರೆಗಳೂ ಹೀಗೆ ಮೈತುಂಬಿಕೊಳ್ಳಲಿ ಎಂದು ಅಪೇಕ್ಷೆ ಪಟ್ಟು ಕಾರ್ಯೋನ್ಮುಖರಾಗುತ್ತಿದ್ದಾರೆ.

“ಅಬ್ಬಾ! ಅದೆಷ್ಟು ಪಕ್ಷಿಗಳು!”, “ಎಷ್ಟು ಸುಂದರವಾಗಿದೆ ಈಗ ಈ ಜಾಗ”, “ಓ! ಇಷ್ಟು ನೀರನ್ನು ನೋಡೇ ಇರಲಿಲ್ಲ!”, “ಎಷ್ಟು ಪ್ರಶಾಂತವಾದ ಪ್ರದೇಶವಾಗಿದೆ ಇದು ಈಗ!” – ಮೇಲೆ ಜನ ಹೀಗೆ ಉದ್ಗರಿಸುವುದನ್ನು ನಾನು ಕೇಳಿದ್ದೇನೆ. ಪ್ರಕೃತಿಗೊಂದು ಅವಕಾಶ ಕೊಟ್ಟರೆ ಅದು ಹೇಗೆ ನಮಗೆ ಫಲ ನೀಡುತ್ತದೆ ಎಂಬುದಕ್ಕೆ ಕೈಕೊಂಡರಹಳ್ಳಿ ಕೆರೆ ಒಂದು ಉದಾಹರಣೆ. ಕೆಲವಷ್ಟೇ ಜನಗಳು ಕೈಗೆತ್ತಿಕೊಂಡ ಕಾರ್ಯದಿಂದ ಬೆಂಗಳೂರಿನ ನಾಗರಿಕರಿಗೆ ಲಾಭವಾಗಿದೆ. ಇದೀಗ ನಿಮ್ಮ ಸರದಿ.

ಲೇಖಕಿಯನ್ನು ಸಂಪರ್ಕಿಸಿ: ವಸುಂಧರ ಕೃಷ್ಣಾನಿ

Read Original story, ‘Rebirth of a Lake’, in English

(Just give nature a chance and in turn she will benefit you and your families in ways you cannot imagine.)

Story Tags: , , , , , , ,

Leave a Reply

Loading...